ಚೈತ್ರಾ ಕುಂದಾಪುರ ಕೇಸ್‌ನಲ್ಲಿ ನಮ್ಮ ಹೆಸರು ತಳುಕು ಹಾಕಿದ್ದಾರೆ - ಸಾಲುಮರದ ತಿಮ್ಮಕ್ಕ ಬೆಂಗಳೂರಿನಲ್ಲಿ ಪ್ರತಿಭಟನೆ

Salu Marada Thimmakka Protest : ಚೈತ್ರಾ ಕುಂದಾಪುರ ಪ್ರಕರಣದಲ್ಲಿ ಸಾಲು ಮರದ ತಿಮ್ಮಕ್ಕ ಅವರ ಸರ್ಕಾರಿ ಕಾರು ದುರ್ಬಳಕೆಯಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಬೇಸರಗೊಂಡಿರುವ ತಿಮ್ಮಕ್ಕ ಅವರು ಬೆಂಗಳೂರು ಪೊಲೀಸ್‌ ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಚೈತ್ರಾ ಕುಂದಾಪುರ ಕೇಸ್‌ನಲ್ಲಿ ನಮ್ಮ ಹೆಸರು ತಳುಕು ಹಾಕಿದ್ದಾರೆ - ಸಾಲುಮರದ ತಿಮ್ಮಕ್ಕ ಬೆಂಗಳೂರಿನಲ್ಲಿ ಪ್ರತಿಭಟನೆ
ಬೆಂಗಳೂರು: ಚೈತ್ರಾ ಕುಂದಾಪುರ ವಂಚನೆ ಪ್ರಕರಣದಲ್ಲಿ ತಮ್ಮ ಹಾಗೂ ತಮ್ಮ ದತ್ತು ಪುತ್ರನ ಹೆಸರು ಎಳೆದು ತಂದು ತೇಜೋವಧೆ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಪರಿಸರ ರಾಯಭಾರಿ ಸಾಲುಮರದ ತಿಮ್ಮಕ್ಕ ಅವರು ನಗರ ಪೊಲೀಸ್‌ ಆಯುಕ್ತರ ಕಚೇರಿ ಎದುರು ಬುಧವಾರ ಪ್ರತಿಭಟನೆ ಮಾಡಿದರು.'' ಚೈತ್ರಾ ಕುಂದಾಪುರ ಮತ್ತು ಗಗನ್‌ ಕಡೂರು ವಂಚನೆ ಪ್ರಕರಣದಲ್ಲಿ ಕಾನೂನು ಪ್ರಕ್ರಿಯೆ ಮುಂದುವರಿದಿದೆ. ಈ ನಡುವೆ ಪ್ರಕರಣಕ್ಕೆ ನನ್ನ ಮತ್ತು ಮಗನ ಹೆಸರು ತಳುಕು ಹಾಕಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ನಾಡಿನ ನೆಲ, ಜಲ, ಪರಿಸರಕ್ಕೆ ನನ್ನ ಸಂಪೂರ್ಣ ಜೀವನ ಮೀಸಲಿಟ್ಟಿದ್ದೇನೆ. ಸರಕಾರ ನನಗೆ ನೀಡಿರುವ ಸವಲತ್ತುಗಳನ್ನು ಬೇರೆಯವರಿಗೆ ನೀಡಿ ವಂಚನೆಗೆ ಅವಕಾಶ ಮಾಡಿಕೊಟ್ಟಿದ್ದೇನೆ ಎಂದು ಸುದ್ದಿ ವಾಹಿನಿಯೊಂದು ವರದಿ ಮಾಡಿದೆ. ಇದರಿಂದ ನಮ್ಮ ಗೌರವಕ್ಕೆ ಧಕ್ಕೆಯಾಗಿದೆ. ಆ ವಾಹಿನಿಯವರು ಸಾಕ್ಷ್ಯ ನೀಡಲಿ, '' ಎಂದು ಸಾಲುಮರದ ತಿಮ್ಮಕ್ಕ ಒತ್ತಾಯಿಸಿದರು. '' ನಾನು ಕರ್ನಾಟಕ ಸರಕಾರದ ಪರಿಸರ ರಾಯಭಾರಿಯಾಗಿದ್ದು, ಸಂಪುಟ ದರ್ಜೆ ಸ್ಥಾನಮಾನ ಹೊಂದಿದ್ದೇನೆ. ಸರಕಾರ ನನಗೆ ನೀಡಿರುವ ಕೆಎ-50, ಜಿ-6363 ನೋಂದಣಿ ಸಂಖ್ಯೆಯ ಕಾರನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಸುದ್ದಿ ವಾಹಿನಿಯಲ್ಲಿ ವರದಿ ಪ್ರಸಾರ ಮಾಡಲಾಗಿದೆ. ವಂಚನೆ ಪ್ರಕರಣದ ಆರೋಪಿ ಚನ್ನನಾಯಕ ನನಗೆ ಸರಕಾರ ನೀಡಿರುವ ಕಾರು ಬಳಸಿದ್ದಾನೆ. ಮತ್ತೊಬ್ಬ ಆರೋಪಿ ಗಗನ್‌ ಕಡೂರು ವಿಧಾನಸೌಧದ ಕೊಠಡಿಯನ್ನು ನವೀಕರಣ ಮಾಡಿಕೊಟ್ಟಿದ್ದಾನೆ ಎಂದು ಸುಳ್ಳು ಹೇಳಲಾಗಿದೆ ಎಂದು ತಿಕ್ಕಮ್ಮ ಬೇಸರ ವ್ಯಕ್ತಪಡಿಸಿದರು ".

ಸಂಧ್ಯಾಕಾಲದಲ್ಲಿ ನನ್ನ ತೇಜೋವಧೆ ನೋವು ತಂದಿದೆ

ಅಸಲಿಗೆ ನನಗೆ ವಿಧಾನಸೌಧದಲ್ಲಿಕೊಠಡಿಯೇ ಇಲ್ಲ. ಇದೆಲ್ಲವೂ ಸುಳ್ಳು ಸುದ್ದಿ. ನಾನು ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಶಿಕ್ಷೆಯಾಗಲಿ. ಜೀವನದ ಸಂಧ್ಯಾಕಾಲದಲ್ಲಿ ನನ್ನ ತೇಜೋವಧೆ ಮಾಡಿರುವುದಕ್ಕೆ ತುಂಬಾ ನೋವಾಗಿದೆ,'' ಎಂದರು.