Cauvery Water Dispute: ಸುಪ್ರೀಂ ಕೋರ್ಟ್‌ನಲ್ಲೂ ಕರ್ನಾಟಕಕ್ಕೆ ಸಿಗದ ನ್ಯಾಯ : CWMA ಆದೇಶ ಪಾಲಿಸಲು ಸುಪ್ರೀಂ ಸೂಚನೆ

Supreme Court On Cauvery Water Issue : ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್‌ನಲ್ಲಿಯೂ ಕೂಡ ಹಿನ್ನಡೆಯಾಗಿದೆ. ಮುಂದಿನ 15 ದಿನ ಪ್ರತಿದಿನ 5 ಸಾವಿರ ಕ್ಯೂಸೆಕ್‌ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ಸುಪ್ರೀಂ ಕೋರ್ಟ್‌‌ ಕರ್ನಾಟಕಕ್ಕೆ ಸೂಚನೆ ನೀಡಿದೆ. ಅದಲ್ಲದೇ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

Cauvery Water Dispute: ಸುಪ್ರೀಂ ಕೋರ್ಟ್‌ನಲ್ಲೂ ಕರ್ನಾಟಕಕ್ಕೆ ಸಿಗದ ನ್ಯಾಯ : CWMA ಆದೇಶ ಪಾಲಿಸಲು ಸುಪ್ರೀಂ ಸೂಚನೆ
ಹೊಸದಿಲ್ಲಿ : ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್‌ ಕೂಡ ಶಾಕ್‌ ನೀಡಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದ್ದು, ಮುಂದಿನ 15 ದಿನ ಪ್ರತಿದಿನ 5 ಸಾವಿರ ಕ್ಯೂಸೆಕ್‌ ನೀರನ್ನು ತಮಿಳುನಾಡಿಗೆ ಹರಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿದೆ. ಇದರಿಂದ ಕಾವೇರಿ ಕೊಳ್ಳದಲ್ಲಿ ಸಮಸ್ಯೆ ಮತ್ತಷ್ಟು ಉಲ್ಭಣಗೊಳ್ಳುವ ಸಾಧ್ಯತೆ ಇದೆ. ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಬಿಆರ್‌ ಗವಾಯಿ ನೇತೃತ್ವದ ತ್ರಿಸದಸ್ಯ ಪೀಠವು ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಮಧ್ಯಪ್ರವೇಶ ಮಾಡಲು ನಿರಾಕರಿಸಿದೆ. ಸಿಡಬ್ಲ್ಯೂಎಂಎ ಆದೇಶವನ್ನು ಪಾಲಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಿದ್ದು, ಪ್ರತಿ 15 ದಿನಗಳಿಗೊಮ್ಮೆ ಪ್ರಾಧಿಕಾರ ಸಭೆ ನಡೆಸಬೇಕು ಎಂದು ಸೂಚನೆ ನೀಡಿದೆ. ತಮಿಳುನಾಡು ಪರ ಹಿರಿಯ ವಕೀಲ ಮುಕುಲ್‌ ರೊಹಟಗಿ ವಾದ ಮಂಡಿಸಿದರೆ, ಕರ್ನಾಟಕದ ಪರ ಹಿರಿಯ ವಕೀಲ ಶ್ಯಾಮ್‌ ದಿವಾನ್‌ ತಮ್ಮ ವಾದವನ್ನು ಮಂಡಿಸಿದರು. ಪ್ರಸ್ತುತ ನೀರಿನ ಸಂಕಷ್ಟ ಇದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದರೆ, ಸಂಕಷ್ಟ ಸೂತ್ರವನ್ನು ಕರ್ನಾಟಕ ಪಾಲಿಸುತ್ತಿಲ್ಲ. ನಾವು ಬಹಳಷ್ಟು ಕಡಿಮೆ ನೀರನ್ನು ಪಡೆಯುತ್ತಿದ್ದೇವೆ ಎಂದು ತಮಿಳುನಾಡು ಪರ ವಕೀಲ ಮುಕುಲ್ ರೋಹಟಗಿ ವಾದ ಮಂಡಿಸಿದರು. ಕರ್ನಾಟಕ ಪರ ವಾದ ಮಂಡಿಸಿದ ಶ್ಯಾಮ್ ದಿವಾನ್, ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿರುವ ಆದೇಶವನ್ನು ನಾವು ಪಾಲಿಸಿದ್ದೇವೆ ಎಂದು ಹೇಳಿದರು. ಇಬ್ಬರ ವಾದ-ವಿವಾದಗಳನ್ನು ಆಲಿಸಿದ ಬಳಿಕ ನ್ಯಾಯಮೂರ್ತಿ ಬಿ ಆರ್ ಗವಾಯಿ ನೇತೃತ್ವದ ತ್ರಿಸದಸ್ಯ ಪೀಠ ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 5 ಸಾವಿರ ಕ್ಯೂಸೆಕ್‌ ನೀರು ಹರಿಸುವಂತೆ ಆದೇಶಿಸಿತು. ಇದರಿಂದ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ನಲ್ಲೂ ಹಿನ್ನೆಡೆಯಾಗಿದೆ. ಇದುವರೆಗೂ ಏನಾಗಿತ್ತು?ಕಾವೇರಿ ನೀರು ನಿರ್ವಹಣಾ ಸಮಿತಿಯೂ ಕಾವೇರಿ ನದಿಯಿಂದ 15 ದಿನಗಳ ಕಾಲ ಪ್ರತಿದಿನ 5 ಸಾವಿರ ಕ್ಯೂಸೆಕ್‌ ನೀರನ್ನು ತಮಿಳುನಾಡಿಗೆ ಬಿಡುವಂತೆ ಸೂಚಿಸಿತ್ತು. ಇದರ ಬೆನ್ನಲ್ಲಿಯೇ ಸೋಮವಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ತಮಿಳುನಾಡು ಪರವಾಗಿ ಆದೇಶ ಹೊರಡಿಸಿತ್ತು. ಸಿಡಬ್ಲ್ಯೂಆರ್‌ಸಿ ಆದೇಶದಂತೆ ನೀರು ಬಿಡುಗಡೆ ಮಾಡಿ ಎಂದು ಕರ್ನಾಟಕ ಸರ್ಕಾರಕ್ಕೆ ಸೂಚಿಸಿತ್ತು. ಇದರ ಬೆನ್ನಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ದಿಲ್ಲಿಯಲ್ಲಿ ಕರ್ನಾಟಕ ಸಂಸದರು ಮತ್ತು ಸಚಿವರ ಜೊತೆ ಸಭೆ ನಡೆಸಿದ್ದರು. ಜೊತೆಗೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಅವರನ್ನು ಭೇಟಿ ಮಾಡಿ ಪರಿಸ್ಥಿತಿಯನ್ನು ಸಿಎಂ, ಡಿಸಿಎಂ ವಿವರಿಸಿದ್ದರು.